ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ್ ರಿಷಬ್ ಪಂತ್ ಆರ್ಥಿಕ ನೆರವು

ಬಾಗಲಕೋಟೆ: ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯಿಂದ ಭಾರತಕ್ಕೆ ಹೆಮ್ಮೆ ತಂದ ಆಟಗಾರ ರಿಷಬ್ ಪಂತ್ ಈ ಬಾರಿಗೆ ಕೇವಲ ಆಟದಲ್ಲಿ ಮಾತ್ರವಲ್ಲ, ಮಾನವೀಯತೆಯಲ್ಲಿಯೂ ಗಮನ ಸೆಳೆದಿದ್ದಾರೆ. ಬಡತನದ ಕಾರಣದಿಂದಾಗಿ ಪದವಿ ಶಿಕ್ಷಣ ಪಡೆಯಲಾಗದೆ ಹಿಂಜರಿಯುತ್ತಿದ್ದ ಬಡ ವಿದ್ಯಾರ್ಥಿನಿಯೊಬ್ಬರಿಗೆ ಅವರು ಸಹಾಯಹಸ್ತ ನೀಡಿರುವುದು ಹೃದಯಸ್ಪರ್ಶಿ ಬೆಳವಣಿಗೆಯಾಗಿದೆ.

ಬೀಳಗಿ ತಾಲೂಕಿನ ರಬಕವಿ ಗ್ರಾಮದ ಕು. ಜ್ಯೋತಿ ಕಣಬೂರ ಎಂಬ ವಿದ್ಯಾರ್ಥಿನಿ ಪಿಯುಸಿಯಲ್ಲಿ ಶೇಕಡಾ 83 ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿದ್ದಾಳೆ. ಉನ್ನತ ಶಿಕ್ಷಣ ಪಡೆಯಬೇಕೆಂಬ ಬಯಕೆ ಇದ್ದರೂ ಆರ್ಥಿಕ ತೊಂದರೆಗಳಿಂದಾಗಿ ಮುಂದಿನ ಓದಿಗೆ ಅವಕಾಶ ಸಿಕ್ಕಿರಲಿಲ್ಲ. ತಂದೆ ತೀರ್ಥಯ್ಯ ಕಣಬೂರ ಗ್ರಾಮದಲ್ಲಿ ಚಿಕ್ಕದಾದ ಚಹಾ ಅಂಗಡಿ ನಡೆಸುತ್ತಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಅತ್ಯಂತ ಕಷ್ಟಕರವಾಗಿತ್ತು.

ಈ ಸಂದರ್ಭ ಗ್ರಾಮಸ್ಥರಾದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟಿ ಅವರು ವಿದ್ಯಾರ್ಥಿನಿಗೆ ನೆರವಾಗಲು ಮುಂದಾದರು. ಅವರು ಜಮಖಂಡಿಯ ಬಿಎಲ್‌ಡಿಇ ಕಾಲೇಜಿನಲ್ಲಿ ಜ್ಯೋತಿಗೆ ಬಿಸಿಎ ಕೋರ್ಸ್‌ನಲ್ಲಿ ಸೀಟ್ ಕೊಡಿಸುವಲ್ಲಿ ಸಹಾಯ ಮಾಡಿದರು. ಈ ಸಂಗತಿಯನ್ನು ಅನಿಲ್ ಅವರು ತಮ್ಮ ಆತ್ಮೀಯರಾದ ಕ್ರಿಕೆಟಿಗ ರಿಷಬ್ ಪಂತ್ ಅವರ ಗಮನಕ್ಕೆ ತಂದಾಗ, ಯಾವುದೇ ತಡವಿಲ್ಲದೆ ಪಂತ್ ನೆರವಿಗೆ ಧಾವಿಸಿದರು.

 

ಜುಲೈ 17 ರಂದು ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾಯಿಸಿರುವ ರಿಷಬ್ ಪಂತ್, ಜ್ಯೋತಿಯ ಮೊದಲ ಸೆಮಿಸ್ಟರ್‌ನ 40 ಸಾವಿರ ರೂ.ಗಳ ಶುಲ್ಕವನ್ನು ತಮ್ಮ ಖರ್ಚಿನಲ್ಲಿ ಭರಿಸಿದ್ದಾರೆ. ಈ ಮೂಲಕ ವಿದ್ಯೆಯ ಸಂಕಷ್ಟ ಎದುರಿಸುತ್ತಿದ್ದ ಜ್ಯೋತಿಗೆ ಹೊಸ ಆಶಾಕಿರಣ ಮೂಡಿದಂತಾಗಿದೆ. ಪಂತ್ ಅವರ ಈ ಮಾನವೀಯತೆ ಜನಮನ ತಲುಪಿದ್ದು, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಸಾಫಲ್ಯಕ್ಕಷ್ಟೇ ಅಲ್ಲ, ಸಹಾನುಭೂತಿಯ ಭಾವನೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂತ್ ಈ ಕಾರ್ಯದಿಂದ, ಕ್ರೀಡಾಪಟು ಎಂದರೆ ಕೇವಲ ಮೈದಾನದ ಆಟಗಾರವಲ್ಲ, ಸಮಾಜದ ದಾರಿ ತೋರಿಸುವ ಬೆಳಕು ಕೂಡ ಎಂಬುದನ್ನು ಮತ್ತೆ ದೃಢಪಡಿಸಿದ್ದಾರೆ.

Leave a Reply

Your email address will not be published. Required fields are marked *

यह भी पढ़ें