ಕಮತಗಿ : ಪಟ್ಟಣದ ಪ್ರತಿಷ್ಠಿತ ಹೊಳೆ ಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಕೇಂದ್ರ ಕಚೇರಿಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಶ್ರೀ ಗಳು ಹಾಗೂ ಧಾರವಾಡ ಕವಲಗೇರಿ ಮಠದ ಶಿವಾನಂದ ಶ್ರೀಗಳು ಇಂದು ಭೇಟಿ ನೀಡಿದರು.
ಇದೇ ವೇಳೆ ಆಡಳಿತ ಮಂಡಳಿಯ ಸನ್ಮಾನ ಸ್ವೀಕರಿಸಿ ಮಾತನಾಡಿ ಹಂಪಿದ ಶ್ರೀಗಳು ರಾಜ್ಯದಲ್ಲೇ ನೇಕಾರಿಕೆ ಹೆಚ್ಚು ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರಿಗೆ, ಕೂಲಿ ಕಾರ್ಮಿಕರಿಗೆ ಆಸರೆಯಾಗಿರುವ ಪತ್ತಿನ ಸಹಕಾರ ಸಂಘಗಳು, ಸರ್ಕಾರದ ಸೌಲಭ್ಯ ಗಳೊಂದಿಗೆ ಅವರ ಬದುಕು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು. ಈ ನಿಟ್ಟಿನಲ್ಲಿ ಕಳೆದ 35 ವರ್ಷಗಳಿಂದ ಸೇವೆಯಲ್ಲಿ ಇರುವ ಶ್ರೀ ಹೊಳೆ ಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಸದ್ಯ 500 ಕೋಟಿ ರೂ.ಗಳ ವಹಿವಾಟು ಹೊಂದಿರುವುದು ಹೆಮ್ಮೆಯ ಸಂಗತಿ, ಮುಂದಿನ ದಿನಗಳಲ್ಲಿ ಈ ಸಂಸ್ಥೆ ಸಾವಿರಾರು ಕೋಟಿ ರೂ.ಗಳ ವಹಿವಾಟಿನೊಂದಿಗೆ ಮುನ್ನಡೆಯಲಿ ಎಂದು ದಯಾನಂದಪುರಿ ಮಹಾಸ್ವಾಮಿಗಳು ಹಾರೈಸಿದರು.
ಇದೇ ವೇಳೆ ಉಪಸ್ಥಿತರಿದ್ದ ಕೈಮಗ್ಗ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರಗಿ ಮಾತನಾಡಿ ರಾಜ್ಯದಲ್ಲಿ ಪ್ರಸ್ತುತ ಜಾತಿಗಣತಿ ಕಾರ್ಯ ತಯಾರಿ ನಡೆದಿದೆ, ಎಲ್ಲ ಸಮುದಾಯಗಳು ಆಯಾ ಸಮಾಜದ ಜನಜಾಗೃತಿಯಲ್ಲಿ ಮುಂದಾಗಿವೆ. 40-50 ಶಾಸಕರನ್ನು ಹೊಂದಿದ ಸಮಾಜಸ್ಥರು ತಾವು ಹಿಂದುಳಿದವರು ಎಂದು ಹೇಳುತ್ತಿರುವಾಗ, ನೇಕಾರಿಕೆ ಸೇರಿದಂತೆ ಮೂಲ ವೃತ್ತಿಪರ ಸಮಾಜಸ್ಥರ ಪರಿಸ್ಥಿತಿ ಏನೆಂಬುದನ್ನು ನಾವೆಲ್ಲರೂ ಅರಿಯಬೇಕೇಂದರು.
ಜಾತಿಗಣತಿ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಭವಿಷ್ಯದ ದಿನಗಳಲ್ಲಿ ಆಯಾ ಸಮಾಜಗಳ ದಿಕ್ಕನ್ನೇ ಬದಲಿಸುತ್ತದೆ. ನಿಷ್ಕಾಳಜಿ ತೋರಿದರೆ ಜಾತಿ ಸಮೀಕರಣ ಮಾಡಲು ಬಂದವರೇ ಅವರ ಅನುಕೂಲಕ್ಕೆ ತಕ್ಕಂತೆ ನಮೂದು ಮಾಡುವ ಸಾಧ್ಯತೆ ಇದೆ. ಈ ಅನುಭವ ಸ್ವತಃ ಗುಳೇದಗುಡ್ಡ ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಅವರಿಗೆ ಆಗಿದೆ. ಹೀಗಾಗಿ ಗಣತಿ ಕಾರ್ಯದಲ್ಲಿ ನೇಕಾರರ ಜಾಗೃತಿ ಅತ್ಯವಶ್ಯಕವಾಗಿದೆ,
ಸದ್ಯದಲ್ಲಿಯೇ ನೇಕಾರ ಮಠಾಧೀಶರು ಒಟ್ಟುಗೂಡಿ ಜಾತಿಗಣತಿಯ ಕುರಿತು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ, ಅವರ ಅಣತಿಯಂತೆ ನೇಕಾರರೆಲ್ಲ ನಡೆಯೋಣ ಎಂದರು.
ಇದೇ ವೇಳೆ ಶ್ರೀ ಹೊಳೆಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಕೇಂದ್ರ ಕಚೇರಿಗೆ ಆಗಮಿಸಿ ಆಶೀರ್ವದಿಸಿದ ಇರ್ವರೂ ಶ್ರೀಗಳಿಗೆ ಸಂಸ್ಥೆ ಅಧ್ಯಕ್ಷರಾದ ಮುರುಗೇಶ್ ಕಡ್ಲಿಮಟ್ಟಿ ಕೃತಜ್ಞತೆ ಹೇಳಿದರು.
ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಪಟ್ಟಣದ ಗುರು ಹಿರಿಯರು ಉಪಸ್ಥಿತರಿದ್ದರು.







One Comment
*