ಗಿರಿಮಠದ ಗಿರಿ : ಧರ್ಮಸಾಮರಸ್ಯದ ಜೀವಂತ ಸಂಕೇತ

ಕಮತಪುರ : ಇತ್ತೀಚಿನ ಸಮಾಜದ ವಾತಾವರಣವನ್ನು ಗಮನಿಸಿದರೆ ಧರ್ಮ–ಜಾತಿ ಹೆಸರಿನಲ್ಲಿ ವಿಭಜನೆ ಉಂಟುಮಾಡುವ ಶಕ್ತಿಗಳು ಹೆಚ್ಚುತ್ತಿವೆ. ರಾಜಕೀಯ ಲಾಭಕ್ಕಾಗಿ ಜನರ ಮನಸ್ಸಿನಲ್ಲಿ ಅನುಮಾನ, ದ್ವೇಷ, ಅಸಹನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಸಾಮರಸ್ಯದ ಬದುಕು ಅಸಾಧ್ಯವೇನೋ ಎಂಬ ಭಾವ ಮೂಡುತ್ತದೆ. ಆದರೆ ಇತಿಹಾಸವನ್ನು ತಿರುಗಿ ನೋಡಿದರೆ ನಮಗೆ ದಾರಿದೀಪವಾಗುವ ಅನೇಕ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಕಮತಪುರದ ಗಿರಿಮಠದ ಗಿರಿ ಒಂದು.

ಮಸೀದಿಯು ಭಕ್ತಿಯ ಮಂದಿರವಾದದ್ದು

ಮಲಪ್ರಭಾ ನದಿಯ ತಟದಲ್ಲಿ ನಿಂತಿರುವ ಈ ಗಿರಿ ಮೂಲತಃ ಆದಿಲ್ ಷಾಹಿ ಕಾಲದ ಮಸೀದಿ. ಇದೇ ಸ್ಥಳದಲ್ಲಿ ಮರುಳಶಂಕರ ದೇವರು ತಪಸ್ಸು ನಡೆಸಿದಾಗ ಅಚ್ಚರಿಯ ಘಟನೆಯೊಂದು ನಡೆಯಿತು. ಎರಡನೇ ಅಲಿ ಆದಿಲ್ ಶಾಹಿಯು ತನ್ನ ಮಸೀದಿಯಲ್ಲಿ ನಮಾಜು ಮಾಡಲು ಬಂದಾಗ, ಆ ವೇಳೆಗೆ ಮರುಳಶಂಕರರು ಒಳಗೆ ಶಿವಪೂಜೆಯಲ್ಲಿ ನಿರತರಾಗಿದ್ದರು. ಸೈನಿಕರು ಬಲವಂತ ಮಾಡಲು ಮುಂದಾದಾಗ ತಪಸ್ಸಿನ ಪ್ರಭಾವದಿಂದ ಸರ್ಪಗಳು ಉದ್ಭವಿಸಿ ಅವರನ್ನು ಭಯಗೊಳಿಸಿದವು. ತಕ್ಷಣ ಬಾದಷಾಹನಿಗೂ ಆತ್ಮಸಾಕ್ಷಾತ್ಕಾರವಾಯಿತು. ಅವರು ಸ್ವತಃ ಶ್ರೀಗಳ ಪಾದಗಳಿಗೆ ಬಿದ್ದು ಕ್ಷಮೆಯಾಚಿಸಿದರು. ಬಾದಷಾಹನು ತನ್ನ ಮಸೀದಿಯನ್ನೇ ಮರುಳಶಂಕರರಿಗೆ ಕಾಣಿಕೆಯಾಗಿ ನೀಡಿದರು. ಪ್ರತಿಯಾಗಿ ಮರುಳಶಂಕರರೂ “ಮುಸ್ಲಿಂ ಧರ್ಮಕ್ಕೆ ಗೌರವ ಸೂಚನೆಯಾಗಿ ಶುಕ್ರವಾರದಂದು ಯಾವುದೇ ಮೆರವಣಿಗೆ ಅಥವಾ ಭಿನ್ನಹ ಇರುವುದಿಲ್ಲ” ಎಂದು ವಚನ ನೀಡಿದರು. ಇದು ನಿಜವಾದ ಧರ್ಮಸಾಮರಸ್ಯದ ದೃಷ್ಟಾಂತ. ಈ ಘಟನೆ ಕೇವಲ ಇತಿಹಾಸವಲ್ಲ; ಇಂದಿನ ಸಮಾಜಕ್ಕೆ ಪಾಠ. ಎಲ್ಲ ಧರ್ಮಗಳೂ ಪ್ರೀತಿ, ಭಕ್ತಿ, ದಯೆ ಎಂಬ ಒಂದೇ ತತ್ವವನ್ನು ಸಾರುತ್ತವೆ. ದೇವರನ್ನು ರಾಮ, ರಹೀಂ, ಶಿವ, ಅಲ್ಲಾ, ಯೇಸು — ಯಾವುದೆ ಹೆಸರಿನಿಂದ ಕರೆಯಲಿ, ತತ್ವ ಒಂದೇ. ಈ ಭಾವೈಕ್ಯತೆಯ ಪ್ರತಿಬಿಂಬವೇ ಗಿರಿಮಠದ ಹುಚ್ಚೇಶ್ವರ ಜಾತ್ರೆ. ಐದು ಗ್ರಾಮಗಳ ಜನ ಸೇರಿ ಪ್ರತಿವರ್ಷ ಜಾತ್ರೆ ಮಾಡುತ್ತಾರೆ. ಪಂಚಮಿ ಶುಕ್ರವಾರ ಬಂದರೆ ಮರುಳಶಂಕರರ ವಚನದಂತೆ ಅದನ್ನು ಮುಂದಿನ ದಿನ ಆಚರಿಸುವ ಪರಂಪರೆ ಇಂದಿಗೂ ಜೀವಂತವಾಗಿದೆ.

ಇಂದಿನ ಸಾಮಾಜಿಕ ಸವಾಲುಗಳ ಮಧ್ಯೆ ಗಿರಿಮಠದ ಗಿರಿಯ ಈ ಸಂದೇಶ ನಮ್ಮೆಲ್ಲರಿಗೂ ಪ್ರಸ್ತುತ — ಧರ್ಮ ಬೇರೆ ಇರಬಹುದು, ಆದರೆ ಮಾನವೀಯತೆಯೇ ಶ್ರೇಷ್ಠ ಧರ್ಮ. ಸಾಮರಸ್ಯದಲ್ಲಿ ಬದುಕಿದಾಗ ಮಾತ್ರ ಶಾಂತಿ, ಪ್ರಗತಿ ಸಾಧ್ಯ.ಗಿರಿಮಠದ ಗಿರಿ ನಮಗೆ ಸಾರುವ ಪಾಠ : ಧರ್ಮದ ಹೆಸರಿನಲ್ಲಿ ವಿಭಜನೆ ಬೇಡ, ಮಾನವೀಯತೆಯ ಹೆಸರಿನಲ್ಲಿ ಏಕತೆ ಬೇಕು.

ಲೇಖನ : ಶಬ್ಬೀರ ಬಿಜಾಪೂರ

Leave a Reply

Your email address will not be published. Required fields are marked *

यह भी पढ़ें