ಕ್ಯಾಮೆರಾ ಹಿಂದಿನ ಮಾಂತ್ರಿಕರು ಮೈದಾನದಲ್ಲಿ ಮಿಂಚಿದ ಕ್ಷಣ ಕ್ರಿಕೆಟ್ ಪಂದ್ಯದಲ್ಲಿ ಬಾಗಲಕೋಟೆ ತಾಲೂಕು ತಂಡ ಕ್ಕೆ ಜಯ

ಬಾಗಲಕೋಟೆ : ಅಂತರಾಷ್ಟ್ರೀಯ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ನವನಗರ ಕ್ರೀಡಾಂಗಣದಲ್ಲಿ ಛಾಯಾಗ್ರಹಕರಿಗಾಗಿ ವಿಶೇಷ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ದಿ. ಚಿಟ್ ಚಾಟ್ ಅಶೋಕ್ (ಅಶ್ಫಾಕ್) ಸ್ಮರಣಾರ್ಥವಾಗಿ ಬಾಗಲಕೋಟೆ ಜಿಲ್ಲಾ ಫೋಟೋ ಮತ್ತು ವಿಡಿಯೋ ಗ್ರಾಫರ್‌ಗಳ ಸಂಘದ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗಲಕೋಟೆ ತಾಲೂಕ ತಂಡ ಗೆಲುವಿನ ನಗೆ ಬೀರಿತು.

ಸ್ಟೂಡಿಯೋಗಳ ಒಳಗಿರುವ ಪರಿಶ್ರಮದ ಕಲಾವಿದರು, ಈ ಬಾರಿ ಮೈದಾನದಲ್ಲಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು. ಫೈನಲ್ ಪಂದ್ಯದಲ್ಲಿ ಬಾಗಲಕೋಟೆ ತಾಲ್ಲೂಕು ತಂಡ ಮತ್ತು ರನ್ನ ಮುಧೋಳ ರಾಯಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮುಧೋಳ ತಂಡದ ಎದುರು, ಬಾಗಲಕೋಟೆ ತಂಡ 8 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ ಭರ್ಜರಿ 133 ರನ್ ಗಳಿಸಿ ಬೃಹತ್ ಗುರಿ ನೀಡಿತು.

ಪ್ರತಿಸ್ಪರ್ಧಿ ತಂಡ ತಕ್ಕಮಟ್ಟಿಗೆ ಪೈಪೋಟಿ ನೀಡಿದರೂ, ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 47 ರನ್ ಗಳಿಸುವಲ್ಲಿ ಸೀಮಿತವಾಯಿತು. ಈ ಮೂಲಕ ಬಾಗಲಕೋಟೆ ತಾಲ್ಲೂಕು ತಂಡ ಜಯವನ್ನು ದಾಖಲಿಸಿತು.

ಅದರಲ್ಲಿಯೂ ರವಿ ದೊಡಮನಿ 70 ರನ್ ಗಳಿಸಿ “ಬೆಸ್ಟ್ ಬ್ಯಾಟ್ಸ್‌ಮನ್” ಪ್ರಶಸ್ತಿಗೆ ಭಾಜನರಾದರೆ, ಶಿವು ಮಂಟೂರ ತಮ್ಮ ಸುಧಾರಿತ ಬೌಲಿಂಗ್‌ನಿಂದ “ಬೆಸ್ಟ್ ಬೌಲರ್” ಪ್ರಶಸ್ತಿಗೆ ಆಯ್ಕೆಯಾದರು. ತಂಡದ ಸರ್ವತೋಮುಖ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.

ಪಂದ್ಯಾಂತರದಲ್ಲಿ ನಡೆದ ಬಹುಮಾನ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿಟ್ ಚಾಟ್ ಸ್ಟುಡಿಯೋ ಮಾಲಿಕ ಬಾಬು ಸಾಹೇಬ ಮುದ್ದೇಬಿಹಾಳ ಭಾಗವಹಿಸಿ, “ಛಾಯಾಗ್ರಹಕರು ಪ್ರತಿದಿನವೂ ಒತ್ತಡದ ಕೆಲಸದಲ್ಲಿ ತೊಡಗಿರುವವರು. ಈ ರೀತಿಯ ಕ್ರೀಡಾ ಕಾರ್ಯಕ್ರಮಗಳು ಅವರಿಗೆ ವಿಶ್ರಾಂತಿಯ ಜೊತೆಗೆ ಒಗ್ಗಟ್ಟು ಬೆಳೆಸುವ ವೇದಿಕೆಯೂ ಆಗುತ್ತದೆ. ಪ್ರತಿವರ್ಷವೂ ಇಂತಹ ಕ್ರೀಡಾ ಕೂಟಗಳು ನಡೆಯಲಿ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ವಿಠ್ಠಲ ಹಿರೇಮಠ, ಜಿಲ್ಲಾ ಅಧ್ಯಕ್ಷ ಜಗದೀಶ ಅಂಬಿಗೇರ, ತಾಲೂಕು ಅಧ್ಯಕ್ಷ ಚಂದ್ರು ಅಂಬಿಗೇರ, ವಿವೇಕಾನಂದ ಗರಸಂಗಿ, ಶಿವು ನರಸೊಬಾ, ಸಂತೋಷ ಹೆಳವರ, ಸಂತೋಷ ಮುಂಡೇವಾಡಿ, ಮಂಜು ಗೋಡೆಕಟ್ಟು, ವಿಠ್ಠಲ ಮೂಲಿಮನಿ, ಪಪ್ಪು ಕಾರವಾ, ಕಾಶೀನಾಥ ಬಿಸನಾಳ, ಸಂಗು ಕಟ್ಟಿಮನಿ, ಗುರು ಬಳಗಾರ, ಶ್ರಿಶೈಲ ಮುರನಾಳ, ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು, ಛಾಯಾಗ್ರಹಕರು, ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

यह भी पढ़ें