ಬಾಗಲಕೋಟೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಸ್ತನ್ಯಪಾನದ ಮಹತ್ವವನ್ನು ಸಾರುವ ಕಾರ್ಯಕ್ರಮವನ್ನು ಬಾಗಲಕೋಟೆ ತಾಲ್ಲೂಕಿನ ಕೌಲಪೇಟದಲ್ಲಿಯ ಅಂಗನವಾಡಿ ಕೇಂದ್ರ ಸಂಖ್ಯೆ 30ರಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಜಯಶ್ರೀ ಇಟ್ಟಿ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು, “ತಾಯಿಯ ಎದೆ ಹಾಲು ಮಗುವಿಗೆ ಬಹುಮುಖ್ಯ. ಸ್ತನ್ಯಪಾನದಿಂದ ಮಗುವಿಗೆ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಸಂಪೂರ್ಣ ಪೌಷ್ಟಿಕಾಂಶ ದೊರೆಯುತ್ತದೆ. ಈ ಹಾಲು ಮಕ್ಕಳಿಗೆ ಸೈನಿಕ ಶಕ್ತಿಯಂತೆ ರಕ್ಷಣೆ ನೀಡುತ್ತದೆ. ತಾಯಿ ಹಾಲು ನೀಡದಿದ್ದರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಬೋರಮ್ಮ ಸನಗೇರಿ ಮಾತನಾಡಿ, “ತಾಯಿಯ ಹಾಲು ಅಮೃತದಂತೆ. ಇದರಲ್ಲಿ ಪುಟ್ಟ ಮಗುವಿಗೆ ಬೇಕಾದ ಎಲ್ಲ ಪೌಷ್ಟಿಕಾಂಶಗಳು ಇದ್ದು, ಅದರ ಪಾನವು ಮಗುವಿನ ಅಭಿವೃದ್ಧಿಗೆ ನೆರವಾಗುತ್ತದೆ. ತಾಯಿ ಹಾಲು ನೀಡದ ಕಾರಣದಿಂದಲೇ ವಿಶ್ವದಾದ್ಯಂತ ಪ್ರತಿವರ್ಷ ಸುಮಾರು 1.4 ಮಿಲಿಯನ್ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ,” ಎಂದು ಆಳವಾಗಿ ವಿವರಿಸಿದರು. ಉಪನ್ಯಾಸಕಿ ಕುಮಾರಿ ಸ್ವಾತಿ ಅವರು 2025ರ ಸ್ತನ್ಯಪಾನ ಅಭಿಯಾನದ ಪರಿಕಲ್ಪನೆಯನ್ನು ವಿವರಿಸುತ್ತಾ, ತಾಯಂದಿರಿಗೆ ಸುಸ್ಥಿರ ಬೆಂಬಲ ವ್ಯವಸ್ಥೆ ನೀಡುವ ಅಗತ್ಯವಿದೆ ಎಂಬ ಸಂದೇಶವನ್ನು ನೀಡಿದರು. ಇದೇ ವೇಳೆ ಡಿಪ್ಲೋಮಾ ತೃತೀಯ ವರ್ಷದ ವಿದ್ಯಾರ್ಥಿಗಳು ಸ್ತನ್ಯಪಾನದ ಮಹತ್ವವನ್ನು ಸಾರುವ ಕಿರು ನಾಟಕವೊಂದನ್ನು ಪ್ರದರ್ಶಿಸಿದರು. ಅಲ್ಲದೇ ತಾಯಿಯ ಹಾಲು ನೀಡುವ ವಿಧಾನಗಳನ್ನು ಚಿತ್ರಪಟಗಳ ಮೂಲಕ ದೃಶ್ಯರೂಪದಲ್ಲಿ ವಿವರಿಸಿದರು. ಈ ಸಂದರ್ಭದಲ್ಲಿ ತಾಯಂದಿರಿಗೆ ಈ ಮೂಲಕ ಸ್ತನ್ಯಪಾನದ ಮಹತ್ವದ ಅರಿವು ಮೂಡಿಸಲಾಯಿತು. ಸಕ್ರಿಯವಾಗಿ ಪಾಲ್ಗೊಂಡ ತಾಯಂದಿರು ಕಾರ್ಯಕ್ರಮದಲ್ಲಿ ಹಲವು ಮಾಹಿತಿ ಪಡೆದರು.





