ಬಾಗಲಕೋಟೆ: ಪ್ರಸ್ತುತ ಚರ್ಚೆಯಲ್ಲಿರುವ ಒಳಮೀಸಲಾತಿ ಸಂಬಂಧಿತ ನಿರ್ಧಾರದಲ್ಲಿ ಸರಕಾರ ಯಾವುದೇ ತರಾತುರಿ ತೋರಬಾರದು. ಜನಗಣತಿಯ ಅಂಕಿ ಅಂಶಗಳು ಸಂಪೂರ್ಣವಾಗಿ ನಿಖರವಾಗಿರುವುದು ಅಗತ್ಯ. ಈ ಮೂಲಕ 101 ಪರಿಶಿಷ್ಟ ಜಾತಿಗಳಿಗೆ ಯಾವುದೇ ರೀತಿಯ ಅನ್ಯಾಯ ಅಥವಾ ಲೋಪ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅವರು ಮಾತನಾಡಿದರು. “2011ರ ಕೇಂದ್ರ ಜಾತಿಗಣತಿ ಪ್ರಕಾರ ಶೇಕಡಾ 4.7%ರಷ್ಟು ಭೋವಿ ಸಮುದಾಯದ ಸಂಖ್ಯೆಯು ತೋರಿಸಲಾಗಿದೆ. ಆದರೆ ಅದು ನಿಖರವೋ ಅಲ್ಲವೋ ಎಂಬ ಬಗ್ಗೆ ಭರವಸೆಯಿಲ್ಲ. ಇಂತಹ ಅಸ್ಪಷ್ಟ ಅಂಕಿಅಂಶಗಳ ಆಧಾರದ ಮೇಲೆ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ,” ಎಂದರು.
“2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆ 1 ಕೋಟಿ 8 ಲಕ್ಷ. ಆದರೆ 15 ವರ್ಷಗಳ ನಂತರ ಅದು ಕಡಿಮೆಯಾದಂತೆ ತೋರಿಸುತ್ತಿರುವುದು ಶಂಕೆಗೆ ಕಾರಣ. ಇದು ವೈಜ್ಞಾನಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಜಾತಿಗಣತಿಯನ್ನು ಮರು ಪರಿಶೀಲನೆಗೊಳಪಡಿಸಬೇಕು,” ಎಂದು ಸ್ವಾಮೀಜಿ ಒತ್ತಾಯಿಸಿದರು.
ಈ ಕುರಿತಂತೆ ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕೆಂದು ಅವರು ಸಲಹೆ ನೀಡಿದರು. “ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆಯಬೇಕು. 224 ಮಂದಿ ಶಾಸಕರಿಗೂ ಪ್ರತ್ಯೇಕವಾಗಿ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು. ಯಾವುದೇ ಸಮುದಾಯಕ್ಕೂ ದೋಷ ಅಥವಾ ಲೋಪ ಆಗಬಾರದು. ಎಲ್ಲರಿಗೂ ನ್ಯಾಯ ದೊರೆಯುವಂತೆಯೇ ಕ್ರಮ ಕೈಗೊಳ್ಳಬೇಕು,” ಎಂದು ತಿಳಿಸಿದರು.
“ಇದಕ್ಕೂ ಮುಂಚೆ ನಾಗ ಮೋಹನ್ ದಾಸ್ ನೇತೃತ್ವದ ಸಮಿತಿ ಮಧ್ಯಂತರ ವರದಿ ಸಲ್ಲಿಸಿತ್ತು. ಆಗಲೂ ಅವರು ಸರಕಾರಕ್ಕೆ ‘ತರಾತುರಿ ಬೇಡ’ ಎಂಬ ಸಲಹೆ ನೀಡಿದ್ದರು. ಈಗ ಮತ್ತೆ ಸರ್ಕಾರ ಎಲ್ಲಿ ಯಾರದೋ ಒತ್ತಡಕ್ಕೆ ಒಳಗಾಗಿ ವರದಿ ತಯಾರಿಸುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಈ ಅನುಮಾನಗಳಿಗೆ ತಡೆ ನೀಡಬೇಕಾದರೆ ಸರ್ಕಾರ ತಕ್ಷಣವೇ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು,” ಎಂದು ಹೇಳಿದರು.
“ಈ ವರದಿ 1 ಕೋಟಿಗೂ ಹೆಚ್ಚು ಪರಿಶಿಷ್ಟ ಜಾತಿಯ ಜನರ ಭವಿಷ್ಯ ನಿರ್ಧರಿಸಲಿದೆ. ಅವರ ಹಕ್ಕುಗಳು ಕಾಪಾಡಲು ಗಮನ ಹರಿಸಬೇಕು. ಜಾತಿಗಣತಿ ಹಾಗೂ ಮೀಸಲಾತಿ ವರದಿ ಎರಡು ಕೂಡ ಪಾರದರ್ಶಕವಾಗಿರಬೇಕು,” ಎಂದು ಅವರು ಪ್ರತಿಪಾದಿಸಿದರು.






