ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಕೂಡ ಕೇಂದ್ರ ಆಯೋಗವೇ ನಡೆಸಲಿ – ನಾಗೇಶ ಎನ್.

ಬಾಗಲಕೋಟೆ: ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೇಂದ್ರ ಚುನಾವಣಾ ಆಯೋಗದ ಮೂಲಕವೇ ನಡೆಸಬೇಕು ಎಂದು  ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ ಎನ್. ಆಗ್ರಹಿಸಿದರು.   ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಲಕಾಲಕ್ಕೆ ತಕ್ಕಂತೆ ಎಲ್ಲ ಚುನಾವಣೆಗಳನ್ನು ಕೇಂದ್ರ ಆಯೋಗವೇ ನಡೆಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಾರಿಯಾದರೆ ತಾಲ್ಲೂಕು, ಜಿಲ್ಲಾ ಪಂಚಾಯತ್‌ಗಳಿಗೆ ಕಾಲಮಿತಿಯಲ್ಲಿ ಚುನಾವಣೆ ನಡೆಯುತ್ತದೆ. ವಿಧಾನಸೌಧದತ್ತ ಜನರೇ ಹೋಗುವ ಸ್ಥಿತಿ ಸರಿಯಲ್ಲ ಎಂದ ಅವರು, ರೈತರ ಸಮಸ್ಯೆ ಕೇಳಲು ಕೂಡ ಯಾರೂ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸರ್ಕಾರ ರೈತರ ಪರ ಕಾಳಜಿ ವಹಿಸದೆ ನಿರ್ಲಕ್ಷ್ಯ ಆಡಳಿತ ಮಾಡುತ್ತಿದೆ. ಕಬ್ಬು ಬೆಳೆಗಾರರ ಸ್ಥಿತಿ ದಿನದಿಂದ ದಿನಕ್ಕೆ ದುಸ್ಥಿತಿಯಾಗುತ್ತಿದ್ದು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು  ಅವರು ಮಾಡಿದರು.

“ಸಕಾಲದಲ್ಲಿ ಪಾವತಿಸಬೇಕಾದ ಹಣ ಕೂಡ ರೈತರಿಗೆ ದೊರೆತಿಲ್ಲ. ಆದರೆ ಜನಪ್ರತಿನಿಧಿಗಳ ಆದಾಯ ಮಾತ್ರ ಹೆಚ್ಚುತ್ತಿದೆ,” ಕಾಂಗ್ರೆಸ್ ಸರ್ಕಾರ ರೈತರಿಗೆ ಕೊಟ್ಟ ಭರವಸೆಗಳು ಬರಿ ಮಾತುಗಳಾಗಿದ್ದು ವಾಸ್ತವದಲ್ಲಿ ಅನ್ನದಾತನನ್ನು ಸಂಪೂರ್ಣ ಕಡೆಗಣಿಸಿದೆ ಎಂದರು. ಬಾಗಲಕೋಟೆ ಜಿಲ್ಲೆಯಲ್ಲಿಯೇ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಮಟ್ಟದಲ್ಲಿ ಈ ಸಂಖ್ಯೆ 1886ಕ್ಕೆ ಏರಿಕೆಯಾಗಿದೆ ಎಂಬುದನ್ನು ನಾಗೇಶ ಎನ್. ಅವರು ಮಾಹಿತಿ ನೀಡಿದರು. ಮುಂಗಾರು ಉತ್ತಮವಾಗಿದ್ದರೂ, ಸರಿಯಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಸರ್ಕಾರ ವಿಫಲವಾಗಿದೆ. ಕೃಷಿ ಸಚಿವರ ನಿರ್ಲಕ್ಷ್ಯದಿಂದ ರಾಜ್ಯದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ ಎಂದು ಟೀಕಿಸಿದರು. ಪಕ್ಷದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವಾಣಿ ಎನ್. ಶೆಟ್ಟಿ  ಮಾತನಾಡಿ “ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಕ್ಕರೆ ಕಾರ್ಖಾನೆಗಳು ನಲುಗುತ್ತಿವೆ. ಸರ್ಕಾರವೇ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ನೇರ ಹೊಣೆಯಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮೀ ಗೌಡರ, ಪ್ರಕಾಶ ಮತ್ತು ಜಿ. ಮಂಜುನಾಥ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

यह भी पढ़ें