
ಬಾಗಲಕೋಟೆ (ಕಮತಗಿ):ಬಡತನ, ಅಂಗವಿಕಲತೆ, ಜೀವನದ ಅನೇಕ ಸವಾಲುಗಳು—ಇವೆಲ್ಲವೂ ನೇಕಾರ ಲಕ್ಷ್ಮಣ ಕಕ್ಕನ್ನವರ ಅವರನ್ನು ತಡೆಯಲಿಲ್ಲ. ಕೇವಲ ಒಂಟಿ ಕಾಲಿನಿಂದ ಸೀರೆ ನೇಯುವ ಅಪೂರ್ವ ಸಾಮರ್ಥ್ಯ ಹೊಂದಿರುವ ಈ ದುಡಿಮೆಯ ಕಲಾವಿದ ಇತ್ತೀಚೆಗೆ ರಾಜ್ಯ ಸರ್ಕಾರದ ನೇಕಾರ ಪ್ರಶಸ್ತಿಗೆ ಆಯ್ಕೆಯಾಗಿ, ಕಮತಗಿ ಪಟ್ಟಣದ ಹೆಮ್ಮೆ ಹೆಚ್ಚಿಸಿದ್ದಾರೆ.
ಆಗಸ್ಟ್ 7ರಂದು ಬೆಂಗಳೂರಿನ ಕಬ್ಬನ ಪಾರ್ಕ್‌ನ ನೌಕರರ ಭವನದಲ್ಲಿ ನಡೆಯಲಿರುವ ನೇಕಾರ ದಿನಾಚರಣೆ ಕಾರ್ಯಕ್ರಮದಲ್ಲಿ, ರಾಜ್ಯದ ಐವರು ಮಹನೀಯ ನೇಕಾರರೊಂದಿಗೆ ಕಕ್ಕನ್ನವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಗೌರವವು ಅವರ ಕಲೆಯ ಗುರುತಿಗಷ್ಟೇ ಅಲ್ಲ, ಅವರ ದೈರ್ಯ ಮತ್ತು ಶ್ರಮದ ಬೆಲೆ ಕೂಡ ಆಗಿದೆ.
ಇಳಕಲ್ ಮಾದರಿಯ ಕಾಟನ್ ಸೀರೆಗಳಿಗೆ ದೇಶದಾದ್ಯಾಂತ ಬಹು ದೊಡ್ಡ ಬೇಡಿಕೆ ಇದೆ. ಈ ಶೈಲಿಯನ್ನು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಬೆಳೆಸಿರುವ ಕಕ್ಕನ್ನವರು, ದುಡಿಮೆ, ಶಿಸ್ತು ಮತ್ತು ದೃಢ ನಂಬಿಕೆಯ ಮೂಲಕ ಕಲೆಗೂ ಬದುಕಿಗೂ ಹೊಸ ಅರ್ಥವನ್ನು ನೀಡಿದವರು. ಸಾಮಾನ್ಯವಾಗಿ ಅಂಗವಿಕಲರು ಇತರರ ಸಹಾಯಕ್ಕೆ ನಿರೀಕ್ಷೆಯಿಂದಿರುತ್ತಾರೆ. ಆದರೆ ಕಕ್ಕನ್ನವರು ಅದಕ್ಕಿಂತ ಭಿನ್ನ. ಅವರ ಪತ್ನಿಯ ಸಹಕಾರದೊಂದಿಗೆ, ತಮ್ಮ ಕೈಲಾದಷ್ಟು ಶ್ರಮಿಸಿ, ಬದುಕನ್ನೇ ಒಂದು ಕಲೆಯಂತೆ ರೂಪಿಸಿಕೊಂಡಿದ್ದಾರೆ. ವಿಶೇಷವಾಗಿ ಅವರ ಪತ್ನಿಯೂ ಅಂಗವಿಕಲರಾಗಿದ್ದು, ಈ ಜೋಡಿಯ ದಾಂಪತ್ಯ ಜೀವನವೇ ಸಂಕಟಗಳನ್ನು ಸವಾಲಾಗಿ ಪರಿಗಣಿಸಿ ಜಯಿಸುತ್ತಿರುವ ಹಾದಿಯಾಗಿದೆ.
ಈ ದಂಪತಿಗೆ ಮೂರು ಜನ ಮಕ್ಕಳು ಇದ್ದಾರೆ. ಅವರದೇ ಆದ ಮನೆ ಕೂಡ ಅವಸ್ಥೆಯಲ್ಲಿದ್ದು, ಈಗ ಅವರು ಸ್ನೇಹಿತನ ಮನೆಯಲ್ಲಿ ಸೀರೆ ನೇಯುವ ಕೆಲಸವನ್ನು ಮುಂದುವರೆಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರವು ಇವರಿಗೆ ನೆಲೆಯೊಂದನ್ನು ಕಲ್ಪಿಸಿದರೆ, ಜೀವನಕ್ಕೆ ಹೊಸ ಬಲ ದೊರೆಯಲಿದೆ.
“ಪ್ರತಿಭೆಗೆ ಅಡೆತಡೆ ಎಂಬುದು ಇಲ್ಲ ಎಂಬುದನ್ನು ಲಕ್ಷ್ಮಣ ಕಕ್ಕನ್ನವರ ಜೀವನವೇ ಸಾರುತ್ತದೆ. ಅವರ ಸಾಧನೆ ನೇಕಾರ ಸಮುದಾಯದ ಕೀರ್ತಿಯಷ್ಟೇ ಅಲ್ಲ, ಮಾನವೀಯತೆಯೂ ಹಾಗೂ ಶ್ರಮಶೀಲತೆಯ ಪ್ರತೀಕವೂ ಹೌದು.”
ಇಂತಹ ಸಾಧಕರು ಸಮಾಜದಲ್ಲಿ ಹೆಚ್ಚು ಬೆಳಕಿಗೆ ಬರಬೇಕು. ಅವರಲ್ಲಿ ಬದುಕಿನ ಹೋರಾಟವಿದೆ, ಶ್ರದ್ಧೆಯಿದೆ, ತ್ಯಾಗವಿದೆ. ಇಂಥವರ ಕಥೆಗಳು ನಮಗೆ ಪ್ರೇರಣೆಯ ಆಗಸವನ್ನು ತೋರಿಸುತ್ತವೆ. ರಾಜ್ಯ ಪ್ರಶಸ್ತಿ ರೂಪದಲ್ಲಿ ಅವರ ಈ ನಿಸ್ವಾರ್ಥ ಕಾಯಕವನ್ನು ಸರ್ಕಾರ ಗುರುತಿಸಿರುವುದು ನಿಜಕ್ಕೂ ಅಭಿಮಾನದ ವಿಷಯ.






